ಎಂದೆಂದು ನಿನ್ನ ಪಾದವೆ ಗತಿಯೆನಗೆ
ಗೋವಿಂದ ಬಾರಯ್ಯ ಎನ್ನ ಹೃದಯ ಮಂದಿರಕೆ
ಮೊದಲಿಂದ ಬರಲಾರದೆ ನಾ ಬಂದೆ
ಇದರಿಂದ ಗೆದ್ದು ಪೋಪುದು ಕಾಣೆ ಮುಂದೆ
ತುದಿ ಮೊದಲಿಲ್ಲದೆ ಪರರಿಂದ ನೊಂದೆ
ಪದುಮನಾಭನೆ ತಪ್ಪು ಕ್ಷಮೆ ಮಾಡು ತಂದೆ
ಹೆಣ್ಣು ಹೊನ್ನು ಮಣ್ಣಿನಾಸೆಗೆ ಬಿದ್ದು
ಪುಣ್ಯ ಪಾಪವನು ನಾ ತಿಳಿಯದೆ ಇದ್ದು
ಅನ್ಯಾಯವಾಯಿತು ಇದಕೇನು ಮದ್ದು
ನಿನ್ನ ಧ್ಯಾನ ಎನ್ನ ಹೃದಯದೊಳಿದ್ದು
ಹಿಂದೆ ನಾ ಮಾಡಿದ ಪಾಪವ ಕಳೆಯೆ
ಮುಂದೆನ್ನ ಜನ್ಮ ಸಫಲ ಮಾಡಿ ಪೊರೆಯೆ
ತಂದೆ ಶ್ರೀ ಪುರಂದರ ವಿಠಲನ ನೆನೆಯೆ
ಎಂದೆಂದಿಗಾನಂದ ಸುಖವನ್ನೆ ಕರೆಯೆ