ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಕರುಣದಿ ಪಿಡಿಕೈಯ್ಯ ||pa||
ಪುಂಢರೀಕಮುನಿವರದ ನಮಿಪೆ ನಿನಗೇ ನೀ ತ್ವರಿತದಲ್ಲೆನಗೆ||a.pa||
ವನಜಭವಾದಿ ಸಮಸ್ತ ಸುರವ್ರಾತಾ-ವಂದಿತ ಶ್ರೀನಾಥಾ
ಪ್ರಣತಾರ್ಥಾಹರನೆ ಕಾಮಿತಫಲದಾತಾ-ಮುನಿಗಣಸಂಧ್ಯಾ ತಾ
ನೆನೆವ ಜನರ ಮನದೊಳಿಹ ವಿಖ್ಯಾತಾ-ಭುವನಾದಿನಾಥಾ
ಘನಮಹಿಮ ಒಲಿದು ಪಾಲಿಸೆನ್ನ ಮಾತಾ-ದಯಮಾಡಿ ತ್ವರಿತಾ || ೧ ||
ಸುರಚಿರ ಮಹಿಮನೆ ಭಜಕಾಮರಧೇನೂ-ವಸುದೇವರ ಸೂನೂ
ಧರಣಿಯೊಳಗೆ ನಮ್ಮ ಹಿರಿಯರನುದ್ಧಾರಾ-ಮಾಡಿದ ಗಂಭೀರಾ
ದೊರೆಯೇ ನಿನ್ಹೊರತನ್ಯರನಾನರಿಯೇ-ಕೇಳಲೊ ನರಹರಿಯೇ
ಕರೆಕರೆ ಭವದೊಳು ಬಿದ್ದು ಬಾಯ್ಬಿಡುವೇ-ಪೊರೆಯೆಂದು ನುಡಿವೇ || ೨ ||
ಬಂದ ಜನರ ಭವಸಾಗರ ಪರಿಮಿತಿ-ತೋರಿಸುತಿಹ ರೀತೀ
ಚೆಂದದಿಂದ ಕರವಿಟ್ಟು ಕಟಿಗಳಲ್ಲಿ-ಈ ಸುಕ್ಷೇತ್ರದಲೀ
ನಿಂದಿಹ ಭೀಮಾತೀರ ಚಂದ್ರಭಾಗಾದಲ್ಲಿಯ ವೈಭೋಗಾ
ತಂದೆ ಶ್ರೀಪತಿ ವಿಠ್ಠಲ ಸುಖಸಿಂಧೋ-ಅನಾಥ ಬಂಧೋ || ೩ ||