ಯಾದವ ನೀ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೋ
ಸೋದರಮಾವನ ಮಧುರೆಲಿ ಮಡುಹಿದ
ಯಶೋದೆ ಕಂದ ನೀ ಬಾರೋ
ಕಣ ಕಾಲಂದಿಗೆ ಘುಲುಘುಲು ಎನುತಲಿ
ಝಣ ಝಣ ಎನುತಿಹ ನಾದಗಳು
ಚಿಣಿಕೋಲು ಚೆಂಡು ಬುಗುರಿಯನಾಡುತ
ಸಣ್ಣವರೊಡಗೂಡಿ ನೀ ಬಾರೋ
ಶಂಖ ಚಕ್ರವು ಕೈಯಲ್ಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೋ
ಅಕಳಂಕ ಮಹಿಮನೆ ಆದಿನಾರಾಯಣ
ಬೇಕೆಂಬ ಭಕುತರ ಬಳಿ ಬಾರೋ
ಖಗವಾಹನನೇ ಬಗೆಬಗೆರೂಪನೆ
ನಗೆಮೊಗದರಸನೆ ನೀ ಬರೋ
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ
ಪುರಂದರ ವಿಠ್ಠಲ ನೀ ಬರೋ