ಎಂದು ಕಾಂಬೆನು ಪಾಂಡುರಂಗ ಮೂರುತಿಯಾ(Endoo kaambeno paanduranga)

ಎಂದು ಕಾಂಬೆನು ಪಾಂಡುರಂಗ ಮೂರುತಿಯಾ
ಇಂದು ಭಾಗನಿವಾಸ ನರನ ಸಾರಥಿಯ ||pa||

ಅರುಣಾಬ್ಜೋಪಮ ಚಾರು ಚರಣಾಂಗುಲಿ ನಖರ
ತರುಣೀಂದುಚ್ಛವಿ ತಿರಸ್ಕರಿಸುವ ಪ್ರಖರ
ಕಿರುಗೆಜ್ಜೆ ಕಡಗ ನೂಪುರ ಪೆಂಡೆ ಶಫರ
ತೆರಜಾನು ಜಂಘೆ ಭಾಸ್ಕರ ರತ್ನ ಮುಕುರ||1||

ರಂಭಾ ಪೋಲುವ ಊರು ಪೊಂಬಣ್ಣಾಂಬರವ
ಕುಂಭೀ ಮಸ್ತಕದೊಲ್ ನಿತಂಬದಿ ಪೊಳೆವ
ಕಂಬು ಮೇಖಳಕಂಜ ಗಂಭೀರ ನಾಭೀ
ಅಂಬುಧಿಶಾಯಿ ವಿಧಿ ಶಂಭು ಪೂಜಿತನ||2||

ಲವಕುಕ್ಷಿತ್ರವಳಿ ಬಾರ್ಗವಿ ವಕ್ಷ ಉರವು
ದ್ರವಿಪೋಲುವ ಕೌಸ್ತುಭ ವೈಜಯಂತಿಯ
ಸುವಿಶಾಲ ವಕ್ಷದೊಳ್ ವಿವಿಧ ಹಾರಗಳು
ನವನೀತ ಚೋರ ಶ್ರೀ ಪವಮಾನಾರ್ಚಿತನ||3||

ಪದಕ ಸರಿಗೆಯ ಜಾಂಬೂನದ ಕಂಬುಕಂಠ
ರದನೀಕರ ಬಾಹು ಚದುರ ಭುಜಕೀರ್ತಿ
ಬದರ ಸಂಕಾಶಾ ಅಂಗದ ರತ್ನ ಕಟಕಾ
ಪದಮಾರುಣ ಕರಯುಗ್ಮ ಕಟಿಯಲ್ಲಿಟ್ಟವನಾ||4||

ವಿಧುಬಿಂಬೋಪಮ ಚಲ್ವವದನ ಕೆಂದುಟಿಯಾ
ಬಿದುರಾಭಾದಶನಾಲಿಂಗದನೊಳ್ ಕಿರುನಗೆಯಾ
ಕದಪು ಕನ್ನಡಿ ನಾಸಾ ತುದಿ ಚಂಪಕ ತೆನೆಯಾ
ಉದಕೇಜಾಯತ ನೇತ್ರಯದುವಂಶೋದ್ಭವನಾ||5||

ಜ್ವಲಿತ ಕುಂಡಲ ಕರ್ಣ ಸುಲಲಿತ ಭ್ರೂಯುಗಳ
ಪೊಳೆವ ಬಾಲ ಶಶಾಂಕ ತಿಲಕಾಂಕಿತ ಫಾಲ
ಅಳಿಬಾಲವೆನಿಪ ಕುಂತಳ ರತ್ನ ಚಕಿತ
ಕಲಧೌತ ಮಕುಟ ದಿಗ್ವಲಯ ಬೆಳಗುವನ ||6||

ಶಠಕೂರ್ಮರೂಪಿಯ ಕಿಟ ಮಾನವ ಹರಿಯಾ
ವಟುಭಾರ್ಗವ ಕಾಕುಸ್ಥ ಶಠ ಕಂಸದ್ವಿಷನ
ನಿಟೆಲಾಂಬಕ ಸಹಾಯ ಖಳಕಟಕಾರಿ ಭೀಮಾ
ತಟವಾಸ ಜಗನ್ನಾಥವಿಠಲ ಮೂರುತಿಯ 7

Comments

No comments yet. Why don’t you start the discussion?

Leave a Reply

Your email address will not be published. Required fields are marked *